ಟ್ರೌಟ್ ಮೀನು
	ಸ್ಯಾಲ್ಮಾನಿಡೀ ಕುಟುಂಬಕ್ಕೆ ಸೇರಿದ ಹೆಸರು ವಾಸಿಯಾದ ಆಹಾರ ಮೀನು. ಸಾಮಾನ್ಯವಾಗಿ ಶೀತಲವಾದ ಸಿಹಿನೀರಿನಲ್ಲಿ ವಾಸಿಸುವುದು. ಆದರೆ ಕೆಲವು ಪ್ರಭೇದಗಳು ತಮ್ಮ ಜೀವನದ ಬಹುಪಾಲನ್ನು ಸಾಗರದಲ್ಲೇ ಕಳೆಯುವುದುಂಟು. ಎಲ್ಲ ಸನ್ನಿವೇಶಗಳಿಗೂ ಹೊಂದಿಕೊಂಡು ಸ್ಥಳೀಯ ಮೀನುಗಳೊಡನೆ ಶೀಘ್ರವಾಗಿ ಬೆರೆಯುವುದರಿಂದ ಇವುಗಳ ಸರಿಯಾದ ವರ್ಗೀಕರಣ ಇನ್ನೂ ಸಾಧ್ಯವಾಗಿಲ್ಲ. ಇವುಗಳ ಅವ್ಯವಸ್ಥಿತ ದೇಹರಚನೆ, ವಿವಿಧವರ್ಣ ಹಾಗೂ ಅಸ್ಥಿರವಾದ ಸ್ವಭಾವಗಳೇ ಈ ಅಸಮರ್ಥತೆಗೆ ಕಾರಣವೆಂದು ಊಹಿಸಲಾಗಿದೆ. ಸೂಕ್ಷ್ಮ ಹುರುಪೆಗಳಿಂದ ಆವೃತವಾದ ಉದ್ದನೆಯ ಶರೀರ, ಹುರುಪೆಗಳಿಂದ ತಲೆ ಮತ್ತು ಮೃದುವಾದ ಬೆನ್ನುರೆಕ್ಕೆಗಳು ಟ್ರೌಟ್ ಮೀನುಗಳು ವೈಶಿಷ್ಟ್ಯ.

	ಕಡಲ ಟ್ರೌಟುಗಳು :	ಇವುಗಳಲ್ಲಿ ಕೆಲವು ಉಪ್ಪುನೀರಿನಲ್ಲೂ, ಕೆಲವು ಸಿಹಿ ನೀರಿನಲ್ಲೂ ವಾಸಿಸುತ್ತವೆ. ಸಮುದ್ರವಾಸಿಯಾದ ಸ್ಯಾಲ್ಮೊ ಟ್ರಟ್ಟಾ ಟ್ರಟ್ಟಾ ಎಂಬುದು ಸಂತಾನಭಿವೃದ್ಧಿಗಾಗಿ ಮಾತ್ರ ನದಿಗೆ ವಲಸೆಹೋಗುತ್ತದೆಯಾದರೂ ಸ್ಯಾಲ್ಮೊ ಟ್ರಟ್ಟಾ ಫೇರಿಯೊ ಎಂಬುದು ತನ್ನ ಜೀವನವಿಡೀ ಸಿಹಿನೀರಿನಲ್ಲೇ ಕಳೆಯುತ್ತದೆ. ಶ್ವೇತಸಮುದ್ರದಲ್ಲಿ, ಐರ್ಲೆಂಡಿನ ಹತ್ತಿರದಲ್ಲಿ ಹಾಗೂ ಸ್ಪೇನಿನ ಉತ್ತರಭಾಗದಲ್ಲಿ ಸಾಗರವಾಸಿಗಳು ಹೇರಳ. ಸರೋವರವಾಸಿಯಾದ ಸ್ಯಾಲ್ವೆಲೈನಸ್ ನಾಮಾಯ್ಕುಶ್ ಅಮೆರಿಕದ ಪಂಚಮಹಾಸರೋವರ ಹಾಗೂ ಉತ್ತರ ಧ್ರುವ ಪ್ರದೇಶದ ಆಳವಾದ ಸರೋವರಗಳಲ್ಲಿ ಜೀವಿಸುತ್ತದೆ. ಸಿಹಿನೀರು ನಿವಾಸಿಗಳು ಸ್ವಭಾವತಃ ವಲಸೆಪ್ರಿಯಗಳಲ್ಲದಿದ್ದರೂ ವಂಶಾಭಿವೃದ್ಧಿಗಾಗಿ ಮುಖಜ ಭೂಮಿಗಳತ್ತ ವಲಸೆ ಹೋಗುವುದುಂಟು. ಕಪ್ಪು, ನೀಲಿ, ಕಂದು ಮತ್ತಿತ್ತರ ವರ್ಣಗಳಿಂದ ಕೂಡಿದ ಬೆನ್ನುಭಾಗ, ಬೂದುವರ್ಣದ ಉದರಭಾಗ, ಹಳದಿ ಬಣ್ಣದ ಪಾಶ್ರ್ವಭಾಗ ಮತ್ತು ವರ್ಣರಂಜಿತ ಚುಕ್ಕೆಗಳಿಂದ ಅಲಂಕೃತವಾದ ಹೊರಮೈ ಟ್ರೌಟುಗಳ ವೈಶಿಷ್ಟ್ಯ. ಬೆನ್ನು ಮತ್ತು ಪಾಶ್ರ್ವಗಳೆರಡೂ ಬೂದಿ ವರ್ಣದವಾಗಿದ್ದು ನಕ್ಷತ್ರಾಕಾರದ ಕಪ್ಪುಚುಕ್ಕೆಗಳನ್ನು ಪಡೆದಿರುವುದು ಸಮುದ್ರ ವಾಸಿಗಳ ಬಾಹ್ಯಲಕ್ಷಣ. ಸಂತಾನಕಾಲದಲ್ಲಿ ಗಂಡುಮೀನಿನ ಉದರ ಗುಲಾಬಿ ವರ್ಣವನ್ನು ತಳೆಯುತ್ತದೆ. ಸ್ಯಾಲ್ಮೊ ಕ್ಲಾರ್ಕಿ ಎಂಬುದರ ಕೆಳದವಡೆಯ ಇಕ್ಕೆಡೆಯಲ್ಲೂ ಕೆಂಪು ಗೆರೆಗಳೂ ಇರುತ್ತವೆ. ಆದರೆ ವರ್ಣಾಲಂಕಾರರಹಿತವಾದ ಮತ್ತು ಸರೋವರವಾಸಿಯಾದ ಸ್ಯಾಲ್ವೆಲೈನಸ್ ನಾಮಾಯ್ಕುಶ್ ಎಂಬುದರಲ್ಲಿ ತಿಳಿಹಳದಿ ಬೂದುವರ್ಣದ ಚುಕ್ಕೆಗಳಿವೆ.

	ದೋಣಿಯಾಕಾರದ ಟ್ರೌಟ್ ಮೀನುಗಳ ಉದ್ದ ಮತ್ತು ತೂಕಗಳು ಅನುಕ್ರಮವಾಗಿ 100 ಛಿm. ಮತ್ತು 45  ಞg.ಗಳು. ಸ್ಥೂಲದೇಹಿಗಳಾದ ಕಡಲ ವಾಸಿಗಳ ಬಾಲ ಹೆಚ್ಚು ಕಡಿಮೆ ಚಚ್ಚೌಕಾಗಿದೆ. ಆದರೆ ಸರೋವರವಾಸಿಯಾದ ಸ್ಯಾಲ್ಮೊ ಫೆರೋಕ್ಸಿನಲ್ಲಿ ಈ ರೀತಿಯ ಬಾಲವಿಲ್ಲ. ಎಲ್ಲ ಟ್ರೌಟ್ ಮೀನುಗಳಲ್ಲಿ ಹಿಂಬೆನ್ನು ರೆಕ್ಕೆಗೂ ಪಾಶ್ರ್ವರೇಖೆಗೂ ಮಧ್ಯೆ 12-15 ಹುರುಪೆಗಳಿವೆ. ಅಗಲವಾದ ಬಾಯಿ, ಪ್ರಬಲವಾದ ಓಷ್ಠ (ವೋಮರ್) ದಂತಪಂಕ್ತಿ ಈ ಟ್ರೌಟುಗಳ ಮತ್ತೊಂದು ವೈಶಿಷ್ಟ್ಯ. ಇವುಗಳ ಬೆಳವಣಿಗೆಯ ವೇಗ ಇವು ವಾಸಿಸುವ ನೀರಿನ ಉಷ್ಣತೆಯನ್ನು ಆಧರಿಸಿದೆ. ಉತ್ತರದ ಶೀತಲ ಹಾಗೂ ಗಡಸು ನೀರಿನಲ್ಲಿರುವುವಕ್ಕಿಂತ ನಿಧಾನ. ಸರೋವರವಾಸಿಗಳ ಬೆಳವಣಿಗೆ ಅತಿ ಬಿರುಸು. ಇವು ದೀರ್ಘಾಯುಷಿಗಳೂ ಹೌದು. ಸೆಪ್ಟೆಂಬರ್-ಅಕ್ಟೋಬರ್ ಮಾಸಗಳಲ್ಲಿ ನೆರೆ ಬಂದಾಗ ಗಂಡು ಮತ್ತು ಹೆಣ್ಣುಗಳೆರಡೂ ವಂಶಾಭಿವೃದ್ಧಿಗಾಗಿ ಕಲ್ಲುನೆಲೆಯನ್ನರಸಿ ವಲಸೆಹೋಗುತ್ತವೆ. ಸಮುದ್ರವಾಸಿಗಳೂ ನದಿಗೆ ವಲಸೆಹೋಗುವುವು. 7-10 ಛಿm. ಆಳದ ಜಲ್ಲಿಕಲ್ಲಿನ ತಗ್ಗುನೆಲೆಯಲ್ಲಿ ಹೆಣ್ಣುಗಂಡುಗಳು ಕೂಡುತ್ತವೆ. ತತ್ತಿ ಮತ್ತು ವೀರ್ಯಗಳೆರಡೂ ಏಕಕಾಲದಲ್ಲಿ ಬಿಡುಗಡೆಯಾಗಿ ನೀರಿನಲ್ಲಿ ನಿಷೇಚನೆ ನಡೆಯುತ್ತದೆ. ನಿಷೇಚಿತ ಅಂಡಗಳ ಬೆಳವಣಿಗೆ ನೀರಿನ ಉಷ್ಣತೆಯನ್ನು ಅವಲಂಬಿಸಿದೆ. ಸಾಮಾನ್ಯವಾಗಿ ಮೊಟ್ಟೆ ಇಟ್ಟ 5-6 ತಿಂಗಳಲ್ಲಿ ಮರಿಗಳು ಹೊರಬರುತ್ತವೆ. ಕಡಲುವಾಸಿಗಳ ಮರಿಗಳು ಸಮುದ್ರಾಭಿಮುಖವಾಗಿ ತೆರಳುವುವು. ಮೊದಮೊದಲು ಇವು ಜಲಕೀಟಗಳ ಮರಿಗಳನ್ನೂ ಬೆಳೆದಂತೆಲ್ಲ ಜಲಜಂತು ಮತ್ತು ಮೃದ್ವಂಗಿಗಳನ್ನೂ ತಿಂದು ಜೀವಿಸುತ್ತವೆ.

	ಕಾಮನ ಬಿಲ್ಲಿನ ಟ್ರೌಟು (ರೇನ್‍ಬೋ ಟ್ರೌಟ್ಸ್) :	ಇವುಗಳ ವರ್ಣರಂಜಿತ ಪಾಶ್ರ್ವದಿಂದಾಗಿ ಈ ಹೆಸರು ಬಂದಿದೆ. ಸ್ಯಾಲ್ಮೊ ಗೇಡ್ರ್ನೆರಿ ಎಂಬುದು ಕ್ಯಾಲಿಫೋರ್ನಿಯ ಮತ್ತು ಅಲಾಸ್ಕದ ದಕ್ಷಿಣ ನದಿಗಳಲ್ಲಿ ವಾಸಿಸುವುದು. ಇದರ ಸಾಕಣೆ ಬಹು ಸುಲಭ ಹಾಗೂ ಲಾಭದಾಯಕವಾದ್ದರಿಂದ 1880ರಿಂದೀಚೆಗೆ ಬ್ರಿಟಿಷರು ಆಮದು ಮಾಡಿಕೊಳ್ಳುತ್ತಿದ್ದಾರೆ. ಈ ಟ್ರೌಟಿನ ಉದ್ದ 25-50 ಛಿm. ; ತೂಕ 3.85 ಞg ಹಸಿರು ಮಿಶ್ರಿತ ಬೂದು, ನೀಲಿ ಇಲ್ಲವೆ ಕಪ್ಪು ಬಣ್ಣದ ಬೆನ್ನೂ ಶರೀರದುದ್ದಕ್ಕೂ ಪ್ರಸರಿಸಿರುವ ಗುಲಾಬಿ ವರ್ಣದ ಗೆರೆಗಳಿರುವ ಪಾಶ್ರ್ವವೂ ಬೆಳ್ಳನೆಯ ಉದರಭಾಗವೂ ಈ ಮೀನಿನ ವೈಶಿಷ್ಟ್ಯ. ತಲೆಯ ಮೇಲೆ ಕಪ್ಪು ಚುಕ್ಕೆಗಳಿವೆ. ಬೆನ್ನು, ಪಾಶ್ರ್ವ ಹಾಗೂ ಈಜುರೆಕ್ಕೆಗಳೂ ಕುಂಕುಮವರ್ಣದ ಭುಜ ಮತ್ತು ಕಟಿರೆಕ್ಕೆಗಳೂ ಇವುಗಳ ಹೆಗ್ಗುರುತು. ಈ ಟ್ರೌಟುಗಳು ಇತರ ಬಗೆಯ ಮೀನುಗಳಿಗಿಂತ ವೇಗವಾಗಿ ಬೆಳೆಯುವುದರಿಂದ ಕೇವಲ ಎರಡು ವರ್ಷಗಳಲ್ಲೇ ಉತ್ತಮ ಫಲವೀಯತ್ತವೆಯಲ್ಲದೆ ಮತ್ಸ್ಯಕೃಷಿಗೆ ಯೋಗ್ಯವಾದ ಮೀನುಗಳೆನಿಸಿವೆ. ಆದರೆ ಈ ಉದ್ಧಿಶ್ಯಕ್ಕಾಗಿ ಕೂಡಿಟ್ಟ ಮೀನುಗಳು ಕಾಲಾನಂತರ ಸಮುದ್ರಕ್ಕೆ ವಲಸೆಹೋಗುವುದರಿಂದ ಆಗಾಗ್ಗೆ ಪುನರ್ಭರ್ತಿ ಮಾಡಬೇಕಾಗುವುದು. ಇವು ಸಾಮಾನ್ಯವಾಗಿ ವಸಂತಕಾಲದಲ್ಲಿ ವಂಶಾಭಿವೃದ್ಧಿಗೆ ತೊಡಗುತ್ತವೆ. ವಸತಿನಿರ್ಮಾಣಕಾರ್ಯದಲ್ಲಿ ಗಂಡು ಹೆಣ್ಣಿಗೆ ನೆರವಾಗುತ್ತದೆ. ಇವುಗಳ ಮೊಟ್ಟೆ ಉಳಿದ ಬಗೆಯವಕ್ಕಿಂತ ಸಣ್ಣ ಗಾತ್ರದವು. ಸಂಧಿಪದಿ ಮುಂತಾದ ಅಕಶೇರುಕಗಳು ಇವುಗಳ ವಿಶೇಷ ಆಹಾರವಾದರೂ ಇನ್ನಿತರ ಬಗೆಯ ಸಣ್ಣಮೀನುಗಳನ್ನು ತಿಂದು ಜೀವಿಸುವುದೂ ಉಂಟು. 

	ಈ ಮೀನುಗಳ ಉತ್ತಮ ಬೇಟೆ ಮೀನುಗಳು (ಗೇಮ್ ಫಿಶ್). ಇವುಗಳನ್ನು ಉತ್ತರ ಭಾರತದ ಭಾರತದ ಪರ್ವತಗಳ ಪ್ರದೇಶದ ಶೀತಲ ನೀರಿನಲ್ಲಿ ಹಾಗೂ ಹಗಾಉ ದಕ್ಷಿಣ ಭಾರತದ ಊಟಿ ಮತ್ತು ನೀಲಗಿರಿ ಬೆಟ್ಟ ಪ್ರದೇಶಗಳಲ್ಲಿ ಬ್ರಿಟಿಶ್ ಆಳ್ವಿಕೆಯ ಕಾಲದಲ್ಲಿ ತಂದು ಸಾಕಲಾಯಿತು. 
 (ಎಸ್.ಎಚ್‍ಒ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ